ಒಂದು ಚಿತ್ರದ ಸೌಂದರ್ಯತೆ
ಅಡಗಿರುವುದು
ಅದು ಅಪೂರ್ಣವಾಗಿದ್ದರೂ
ಪರಿಪೂರ್ಣವಾಗಿದೆ ಎಂದು
ತೋರಿಸುವ ಭಾವದಲ್ಲೋ?
ಅಥವಾ ಚಿತ್ರ ಪರಿಪೂರ್ಣವಾದಾಗಲೇ
ಅದಕ್ಕೆ ಸೌಂದರ್ಯತೆ ಬರುವುದೋ?
ಸುಂದರತೆ ಎನ್ನುವುದು
ಕಲೆಗಾರನ ಕುಂಚದಲ್ಲಿದೆಯೋ?
ಅಥವಾ ನೋಡುಗನ ನೋಟದಲ್ಲಿದೆಯೋ?
ಪ್ರೀತಿ ಎನ್ನುವುದು ನೀನು ಬೇರೆಯವರಿಂದ ಪಡೆಯುವುದೋ?
ಅಥವಾ ನಿನ್ನಲ್ಲಿರುವುದೋ?
ಸಂತೋಷವೆನ್ನುವುದು
ಹೊರ ಜಗತ್ತಿನಿಂದ ಸಿಗುವುದೋ?
ಅಥವಾ ನಿನ್ನೊಳಗೆ ಝರಿಯಾಗಿ ಹರಿಯುತಿರುವುದೋ?
ಹಣದ ಹೊಳೆಯಲ್ಲಿ ಹರಿಯುತ
ಮೋಜು ಮಾಡುವವನ ಸುಖ ಶಾಶ್ವತವೋ?
ಅಥವಾ ದೇಶಕ್ಕಾಗಿ ಬಲಿದಾನ ಮಾಡುವ ಸೈನಿಕ
ಸಾವಿನಲ್ಲಿ ನೋಡುವ ಸುಖ ಶಾಶ್ವತವೋ?
ತನಗಾಗಿ ಬದುಕುವುದು
ನಿಜವಾದ ಬದುಕೋ?
ಅಥವಾ ಬೇರೆಯವರಿಗಾಗಿ ತಾನು ಬದುಕುವುದು
ನಿಜವಾದ ಬದುಕೋ?
ಬೇರೆಯವರಿಗಾಗಿ ಬದುಕಲು
ತಾನು ಬದುಕಿರಲೇಬೇಕು ತಾನೇ?!
ಆಗ ಬದುಕಬೇಕೆಂಬ ಭಾವ
ಸ್ವಾರ್ಥವೋ ನಿಸ್ವಾರ್ಥವೋ?
ಸ್ವಾರ್ಥಿಯಾಗು ಓ ಮನುಜ
ಬೇರೆಯವರಿಗೆ ಒಳ್ಳೆಯದನ್ನು ಮಾಡಬೇಕು
ಎಂಬ ಸ್ವಾರ್ಥಿಯಾಗು
ನೊಂದ ಜೀವಗಳಿಗೆ
ಪ್ರೀತಿ ನೀಡಬೇಕೆಂಬ ಸ್ವಾರ್ಥಿಯಾಗು
ಆದರೆ ಅತಿಯಾದರೆ ಅಮೃತವೂ ವಿಷ
ಅತೀಯಾಗಿ ಯಾವುದನ್ನೂ ನೀಡಬೇಡ
ನಿಧಾನಿಸು, ನಿಧಾನಿಸು
ಪ್ರೀತಿ, ನಗುವನ್ನು ಹಂಚುತಾ ಸಾಗು
Ms. Jayashri Nayak Department of English Sri Poornaprajna Evening College Udupi