ಭೋರ್ಗರೆವ ಕಡಲ ಸಾಲುಗಳು ಒಂದೆಡೆಯಾದರೆ… ಇನ್ನೊಂದೆಡೆ ಹಚ್ಚ ಹಸುರಿನಿಂದ ಕೂಡಿದ ಪಶ್ಚಿಮ ಘಟ್ಟದ ಸಾಲು. ಈ ಪ್ರಕೃತಿ ರಮಣೀಯತೆಯ ಮಧ್ಯೆ ಇರುವುದೇ ಕಾರ್ಕಳ ತಾಲೂಕಿನ ಗಡಿ ಗ್ರಾಮ ಎಳ್ಳಾರೆ. ವಿಭಿನ್ನ ಸಂಸ್ಕೃತಿ ಆಚಾರ ವಿಚಾರಗಳಿಂದ ಪರಶುರಾಮ ಕ್ಷೇತ್ರದ ಏಳು ವರೆ ಮಾಗಣೆಯ ಒಡೆಯ ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ, ಸುಮಾರು ಒಂದು ಸಾವಿರದದ ನಾಲ್ಕು ನೂರು ವರ್ಷಗಳ ಪುರಾತನ ಶಿಲಾಮಯ ಸುಂದರ ದೇವಾಲಯ, ದೇವಾಲಯದ ಸನಿಹದಲ್ಲೇ ಸೂಜಿಗಲ್ಲಿನಂತೆ ಸೆಳೆಯುವ ವಾಲಿಕುಂಜ ಪರ್ವತ, ಕೂಗಳತೆ ದೂರದಲ್ಲಿರುವ ಜಕ್ಕಲ್ ಪಾದೆ ಎಂಬ ಚಾರಣಕ್ಕೆ ಹೇಳಿಸಿದ ಬೆಟ್ಟ.
ತೀರ ಹಳ್ಳಿ ಸೊಗಡಿನ ಈ ಪ್ರದೇಶದಲ್ಲಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ದಿನಾಂಕ 07.02.2024 ರಿಂದ 13.02.2024 ರವರೆಗೆ ನಡೆಯಿತು.
ಶಿಬಿರದ ಚಾಲನೆಯು ಎಳ್ಳಾರೆಯ ಶ್ರೀ ಜನಾರ್ದನ ವಿದ್ಯಾ ಮಂದಿರದ ವಿದ್ಯಾರ್ಥಿಗಳ ಸರಸ್ವತಿ ವಂದನಾ ಕಾರ್ಯಕ್ರಮದೊಂದಿಗೆ ನಡೆಯಿತು.
ಎಳ್ಳಾರೆ ಹಲವಾರು ಸೈನಿಕರನ್ನು ಭಾರತೀಯ ಸೇನೆಗೆ ಕೊಟ್ಟ ಊರು, ಅವರಿಗೆ ಗೌರವ ದ್ಯೋತಕವಾಗಿ ಪ್ರತಿದಿನವೂ ಬೆಳಿಗ್ಗೆ ಧ್ವಜಾರೋಹಣಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿಗಳು ಭಾಗವಹಿಸಿದ್ದು ವಿಶೇಷ.
ಮುಂಜಾನೆ ದೇವಳದ ಘಂಟೆಯ ನಾದವು ಕೇಳುವುದರೊಂದಿಗೆ ಎಚ್ಚರಗೊಳ್ಳುತ್ತಿದ್ದ ಸ್ವಯಂಸೇವಕರು ಪ್ರಾತ ವಿಧಿಗಳನ್ನು ಮುಗಿಸಿ ಯೋಗಾಸನ,ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ರಾಜಗೋಪುರ ಹತ್ತುವಾಗ ದೇವರ ಪೂಜೆಯನ್ನು ನೋಡುವ ಸಾರ್ಥಕ್ಯ ಅವಕಾಶ. ಇರ್ವತ್ತೂರಿನ ಒಡೆಯನ ಪೂಜೆಯನ್ನು ಕಾಣುವ ಭಾಗ್ಯದ ಮಹದಾನಂದವೇ ಬೇರೆ.
ಎಳ್ಳಾರೆಯ ಪರಿಸರದ ಜನ ಜೀವನ ಆರ್ಥಿಕ,ಸಾಮಾಜಿಕ ಮತ್ತು ಶೈಕ್ಷಣಿಕ ವಿಚಾರದ ಸಮೀಕ್ಷೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಹಳ್ಳಿಯ ಜನರ ಮುಗ್ಧತೆ, ಪ್ರೀತಿ ಮನಸ್ಸಿಗೆ ಹತ್ತಿರವಾಯಿತು.
ಸ್ವಯಂ ಸೇವಕರು ತಮ್ಮ ತಮ್ಮ ತಂಡಗಳಿಗೆ ನೀಡಿದ ಜವಬ್ದಾರಿಯನ್ನು ಹೊಂದಾಣಿಕೆಯಿಂದ ನಿರ್ವಹಿಸಿ ಶ್ರಮದಾನದ ಆದಿಯಾಗಿ ಇತರ ಕರ್ತವ್ಯವನ್ನು ನಿರ್ವಹಿಸುವುದಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಕ್ರೀಯಾಶೀಲರಾಗಿ ಭಾಗವಹಿಸಿದರು.
ಶಿಬಿರದಲ್ಲಿ ಒಂದು ದಿನ ಕೈಗಾರಿಕೆಗಳ ಕಾರ್ಯಕ್ಷಮತೆ-ಕಾರ್ಯ ಚಟುವಟಿಕೆ ಹಾಗೂ ಆಂತರಿಕ ಕೆಲಸದ ವಾತಾವರಣವನ್ನು ವೀಕ್ಷಿಸುವ ಸಲುವಾಗಿ ಆದಿಶಕ್ತಿ ಎಕ್ಸ್ ಪೋರ್ಟ್ಸ್ ಮತ್ತು ಅರುಣೋದಯ ಹೋಮ್ ಇಂಡಸ್ಟ್ರಿಗೆ ಭೇಟಿ ಹಾಗೂ ನಾವು ಪ್ರಕೃತಿಯ ಒಂದು ಭಾಗವಾಗಿ ನಿಸರ್ಗದ ವೈವಿಧ್ಯತೆ ಮತ್ತು ವೈಶಿಷ್ಟ್ಯತೆಯನ್ನು ಸವಿಯಲು ಜಕ್ಕಲ್ ಪಾದೆಗೆ ಚಾರಣ ಮತ್ತು ಹೊನ್ನೆ ಜಡ್ಡು ಕೆರೆಯ ಬಳಿಯಲ್ಲಿ ಅವಧಿ ಹಾಗೂ ದೇಸಿಯ ಹಸುಗಳ ಗೋ ಶಾಲೆ ಮುನಿಯಾಲಿನ ಗೋಧಾಮಕ್ಕೆ ಭೇಟಿ ನೀಡಲಾಯಿತು.
ವಿಶಾಲವಾದ ಬೆಟ್ಟ ಜಕ್ಕಲ್ ಪಾದೆಯಲ್ಲಿ ಚಿಂತಕ ಪ್ರಕಾಶ್ ಮಲ್ಪೆಯವರು ಪ್ರಕೃತಿಯ ವಿಚಾರವನ್ನು ಆಧ್ಯಾತ್ಮಿಕವಾಗಿ ವರ್ಣಿಸಿದರು. ಪ್ರಕೃತಿ ಪ್ರಿಯರಿಗೆ ಜಕ್ಕಲ್ ಪಾದೆ ಹಿತವೆನಿಸದೆ ಇರದು.
ಹೊನ್ನೆಜಡ್ಡು ಕೆರೆಯ ದಡದಲ್ಲಿ ನಡೆದ ಅವಧಿಯಲ್ಲಿ ಪ್ರಮೋದ್ ಮಂದಾರ್ತಿ ಅವರ ಮಾತುಗಳು ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಸಾರುತ್ತಿತ್ತು.
ಉಪನ್ಯಾಸಕರಾದ ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀನಿವಾಸ್ ವೈದ್ಯರ ಬ್ರೈನ್ ಬ್ಯಾಟಲ್ ಮತ್ತು ಎನ್ನೆಸ್ಸೆಸ್ ನಲ್ಲಿ ಹಾಡು ಹರಟೆ ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂತು.
ಜೂನಿಯರ್ ಶಂಕರ್ ಅವರ ಅಕ್ಷಯ ವಸಂತ ಜಾದೂವಿನೊಂದಿಗೆ ಜಾಗೃತಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಗ್ರಾಮೀಣ ಭಾಗದ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ 110 ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು.
ಶಿಬಿರದಲ್ಲಿ ಹಳೆವಿದ್ಯಾರ್ಥಿಗಳು ಕೂಡ ಬಹಳ ಪ್ರೀತಿಯಿಂದ ಭಾಗವಹಿಸಿ ಮನರಂಜನಾ ಕಾರ್ಯಕ್ರಮಗಳನ್ನು ನೀಡಿದರು.
ಸ್ಥಳೀಯ ಸಂಘ ಸಂಸ್ಥೆ ಹಾಗೂ ಇತರ ಹವ್ಯಾಸಿ ಕಲಾವಿದರಿಗೂ ಕಾರ್ಯಕ್ರಮ ನೀಡಲು ಆದ್ಯತೆ ಕೊಟ್ಟು ಅವರ ಸಾಂಸ್ಕೃತಿಕ ಸಂಜೆ, ಹಾಗೂ ಯಕ್ಷಗಾನ ತಾಳ ಮದ್ದಳೆಯ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಹೀಗೆ ಎಳ್ಳಾರೆಯ ಪ್ರತೀ ದಿನವೂ ಕೂಡ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮ ಮತ್ತು ಚಟುವಟಿಕೆಗಳಿಂದ ಕೂಡಿತ್ತು.
ಶಿಬಿರಾರ್ಥಿಗಳಿಗೆ ಎನ್ನೆಸ್ಸೆಸ್ ಶಿಬಿರ ಕೇವಲ ಮನರಂಜನೆಯ ಮಾಧ್ಯಮವಾಗದೆ ಪ್ರತಿಯೊಂದು ಮನಸ್ಸುಗಳನ್ನು ಬೆಸೆಯುವ, ಹೃದಯಗಳನ್ನು ಒಂದುಗೂಡಿಸುವ, ತಾರತಮ್ಯವನ್ನು ದೂರಮಾಡುವ, ಐಕ್ಯತೆಗಳಿಸುವ ಮತ್ತು ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ಹಾಗೂ ಸಹಕಾರ-ಸಹಬಾಳ್ವೆಯ ಜೀವನ, ಸಕಾರಾತ್ಮಕ ವ್ಯಕ್ತಿತ್ವ ರೂಪಿಸುವ ವೇದಿಕೆಯಾಯಿತು.
ಯಾವುದೇ ಕಾರ್ಯವಾಗಿರಲಿ ಅದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು ಅದನ್ನು ಸಾಧಿಸ ಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬೇಕು. ಅಂತೆಯೇ ಆಯೋಜಕರ ಶ್ರೇಷ್ಠ ಗುರಿಯನ್ನು ಸಾಕಾರಗೊಳಿಸುವಲ್ಲಿ ಸ್ವಯಂಸೇವಕರು ನಿಸ್ವಾರ್ಥವಾಗಿ ಶ್ರಮಿಸಿದ್ದಾರೆ, ಮಾತ್ರವಲ್ಲದೇ 7 ದಿನವನ್ನೂ ಅವಿಸ್ಮರಣೀಯವಾಗಿಸಿದ್ದಾರೆ.
ಶಿಬಿರವು ಯಶಸ್ವಿಯಾಗಿದೆ ಎನ್ನಲು ವಿದ್ಯಾರ್ಥಿಗಳು ಶಿಬಿರ ಜ್ಯೋತಿಯ ದಿನ ಆಡಿದ ಮನದಾಳದ ಮಾತುಗಳೇ ಸಾಕ್ಷಿ.
✍️ ದೀಪಕ್ ಕಾಮತ್ ಎಳ್ಳಾರೆ, ದ್ವಿತೀಯ ಬಿ.ಕಾಂ.ಬಿ.
ಅಕ್ಷಯವಸಂತ – ಜಾದುಜಾಗೃತಿ (ಗಿಲಿಗಿಲಿಮ್ಯಾಜಿಕ್ಕಾರ್ಯಕ್ರಮ)
ಅಂತರಂಗದ ಬೆಳಕು ನಿಸರ್ಗದ ಮಡಿಲು) ಪಾದೆಯ ಮೇಲೆ ಮೂಡಿದ ಪರಿಸರ ಪ್ರಜ್ಞೆ
ಬುದ್ಧಿ ಚುರುಕುಗೊಳಿಸಿದ ರಸಪ್ರಶ್ನೆ ಕಾರ್ಯಕ್ರಮ
ಆರೋಗ್ಯ ಭಾಗ್ಯಕ್ಕೊಂದು ಅಳಿಲ ಸೇವೆ (ಉಚಿತ ಆರೋಗ್ಯ ತಪಾಸಣಾ ಶಿಬಿರ)
ಕಾಂತಾರ ಚಲನಚಿತ್ರ ಖ್ಯಾತಿಯ ಸಮರ್ಥ ಕಲಾವಿದರಾದ ಶ್ರೀ ಸತೀಶ್ ಆಚಾರ್ಯರವರ ಶುಭ ನುಡಿಗಳೊಂದಿಗೆ ಸಂಪನ್ನಗೊಂಡ ಶಿಬಿರ
ಭವ್ಯ ಭಾರತಿಗೆ ಬೆಳಕಿನ ಪ್ರೀತಿ – ಭಾರತ ಜ್ಯೋತಿ (ಶಿಬಿರ ಜ್ಯೋತಿ)
ಸಣ್ಣ ಉದ್ದಿಮೆ ದೊಡ್ಡ ಅನುಭವ (ಅರುಣೋದಯ ಹೋಮ್ ಇಂಡಸ್ಟ್ರೀಸ್ ಗೆ ಭೇಟಿ)