ಉಡುಪಿ ಶ್ರೀ ಅದಮಾರು ಮಠಾಧೀಶರಾದ ಕೀರ್ತಿಶೇಷ ಶ್ರೀ ವಿಭುದೇಶ ತೀರ್ಥ ಶ್ರೀಪಾದರ ಶೈಕ್ಷಣಿಕ ಸಮಗ್ರತೆ, ದೂರದರ್ಶಿತ್ವಕ್ಕೆ ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ವಿಶಿಷ್ಟ ಕೊಡುಗೆ. ದೇಶದಾದ್ಯಂತ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಶ್ರೀಪಾದರದಾದರೂ ಆ ಕಾಲಕ್ಕೆ ಸಂಧ್ಯಾ ಕಾಲೇಜಿನ ಪರಿಕಲ್ಪನೆ ಶೈಕ್ಷಣಿಕ ಅನನ್ಯತೆಗೆ ಸಾಕ್ಷಿಯಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ಯಾರೂ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು, ಅವರ ವಿದ್ಯಾಭ್ಯಾಸ ಕುಂಠಿತವಾಗಬಾರದೆಂದು ಸುಮಾರು ಆರು ದಶಕಗಳ ಹಿಂದೆಯೇ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜನ್ನು ಉಡುಪಿಯ ಪೂರ್ಣಪ್ರಜ್ಞ ಕ್ಯಾಂಪಸ್ ನಲ್ಲಿ ಸ್ಥಾಪಿಸಿದರು. ಅಂದು ಉಡುಪಿ ಜಿಲ್ಲಾ ಕೇಂದ್ರವೂ ಆಗಿರಲಿಲ್ಲ. ಗ್ರಾಮೀಣ ಪರಿಸರದ ವಿದ್ಯಾಕಾಂಕ್ಷಿಗಳಿಗೆ ವಿದ್ಯೆಯನ್ನು ಮುಂದುವರಿಸಲು ಕಷ್ಟಸಾಧ್ಯವೆಂದು ಅರಿತು “ದುಡಿಮೆಯೊಂದಿಗೆ ಕಲಿಕೆ” ಎಂಬ ಆಶಯವನ್ನಿರಿಸಿಕೊಂಡು ಸಂಸ್ಥೆಯನ್ನು ಸ್ಥಾಪಿಸಿದರು.
ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ನ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು 1966ರಲ್ಲಿ ಸ್ಥಾಪಿತವಾಯಿತು. ವಿಶ್ವವಿದ್ಯಾಲಯ ಅನುದಾನ ಆಯೋಗ ನವದೆಹಲಿ, ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯಗಳಿಂದ ಮಾನ್ಯತೆ ಪಡೆದಿರುವ ನಮ್ಮ ಈ ಕಾಲೇಜು ಅನುದಾನಿತ ಉಡುಪಿ ಜಿಲ್ಲೆಯ ಏಕೈಕ ಸಂಧ್ಯಾ ಕಾಲೇಜಾಗಿದೆ. ದೂರಶಿಕ್ಷಣ, ಅಂಚೆ ತೆರಪಿನ ಶಿಕ್ಷಣ ಕ್ಕಿಂತ ಹೆಚ್ಚಿನ ಅಧ್ಯಯನ ಯೋಗ್ಯ ಹಾಗೂ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಅನುಕೂಲಕರವಾದ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವುದು ಪರಮಪೂಜ್ಯ ಶ್ರೀಪಾದರ ಆಶಯ ಧ್ಯೇಯ ಹಾಗೂ ಆದ್ಯತೆಯಾಗಿತ್ತು . ವಿಷಯಜ್ಞಾನ, ಸರ್ವಾಂಗೀಣ ಪ್ರಗತಿಯ ದೃಷ್ಟಿಯಲ್ಲಿ ಉನ್ನತ ವ್ಯಾಸಂಗದ ಶೈಕ್ಷಣಿಕ ಶಿಸ್ತು ರೆಗ್ಯುಲರ್ ಕೋರ್ಸ್ ನಿಂದ ಮಾತ್ರ ಸಾಧ್ಯ. ಸರ್ಟಿಫಿಕೇಟ್ ಆಧಾರಿತ ಶಿಕ್ಷಣಕ್ಕಿಂತ ಜ್ಞಾನಾಧಾರಿತ ಶಿಕ್ಷಣ, ವ್ಯಕ್ತಿತ್ವ ವಿಕಸನಕ್ಕೆ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಬಿ ಎ, ಬಿ ಕಾಂ ಹಾಗೂ ಎಂ ಕಾಂ ಪದವಿ ಕೋರ್ಸ್ಗಳಿಗೆ ಅವಕಾಶಗಳಿವೆ. ಬಿ ಕಾಂ ಪದವಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಎರಡು ವಿಭಾಗವನ್ನು ಹೊಂದಿದೆ. ಆರಂಭದ ದಿನಗಳಲ್ಲಿ ದುಡಿಮೆಯೊಂದಿಗೆ ಕಲಿಕೆಯ ದೃಷ್ಟಿಯಿಂದ ಸಂಧ್ಯಾ ಕಾಲೇಜನ್ನು ಆಯ್ಕೆ ಮಾಡುತ್ತಿದ್ದರು. ಪ್ರಸ್ತುತ ಇದರೊಂದಿಗೆ ಸಿ ಎ, ಸಿ ಎಸ್, ಸಿ ಎಂ ಎ ಇನ್ನಿತರ ವೃತ್ತಿಪರ ಕೋರ್ಸ್ ಗಳೊಂದಿಗೆ ಜೊತೆಯಾಗಿ ಅಗತ್ಯ ಪದವಿ ಶಿಕ್ಷಣವನ್ನು ಪಡೆಯಲು ಸಂಧ್ಯಾ ಕಾಲೇಜು ವಿದ್ಯಾರ್ಥಿಗಳ ಉತ್ತಮ ಆಯ್ಕೆಯಾಗಿರುತ್ತದೆ. ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ಪದವಿ ಪೂರ್ವ ಶಿಕ್ಷಣವನ್ನು ಅತ್ಯುತ್ತಮ ರ್ಯಾಂಕ್ ನೊಂದಿಗೆ ಪೂರೈಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ನಮ್ಮಿ ಕಾಲೇಜನ್ನು ಆಯ್ಕೆ ಮಾಡುತ್ತಿರುವುದು ಸಂಸ್ಥೆಯ ಗುಣಮಟ್ಟವನ್ನು ಸೂಚಿಸುತ್ತದೆ.
ಕಾಲೇಜಿನಲ್ಲಿ ಹಗಲಿನ ಹೊತ್ತು ಸಿ ಎ, ಸಿ ಎಸ್, ಸಿ ಎಂ ಎಗಳಿಗೆ ತಜ್ಞ ಅಧ್ಯಾಪಕರಿಂದ ತರಬೇತಿ ನೀಡಲಾಗುತ್ತಿದೆ. ಸರಕಾರಿ, ಅರೆಸರಕಾರಿ, ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವವರು, ಆರ್ಥಿಕವಾಗಿ ಹಿಂದುಳಿದವರು ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿ ಅನೇಕ ವರ್ಷಗಳ ಶೈಕ್ಷಣಿಕ ಬಿಡುವಿನ ನಂತರದಲ್ಲೂ ವಯೋಮಿತಿ ಇಲ್ಲದೆ ಬಿ ಕಾಂ ಹಾಗೂ ವಿಶೇಷವಾಗಿ ಬಿ ಎ ಪದವಿಗೆ ಪ್ರವೇಶಾತಿಯನ್ನು ಪಡೆಯುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದ್ದು ಶ್ರೀಪಾದರ ಆಶಯವು ಈಡೇರಿಸಿದಂತಾಗುತ್ತಿದೆ.
ಪ್ರಸ್ತುತ ನಮ್ಮ ಈ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿರುವ ಉಡುಪಿ ಶ್ರೀ ಅದಮಾರು ಮಠದ ಹಿರಿಯ ಪೀಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿಭುದೇಶ ತೀರ್ಥ ಶ್ರೀಪಾದರ ಕನಸಿನಂತೆ, ಆಶಯ– ಆದ್ಯತೆಯೊಂದಿಗೆ ಮುಂದುವರೆದು ಸಂಧ್ಯಾ ಕಾಲೇಜನ್ನು ಇನ್ನಷ್ಟು ಉನ್ನತೀಕರಿಸಿದ್ದಾರೆ. ಪದವಿಯೊಂದಿಗೆ ವಾಣಿಜ್ಯ ಸ್ನಾತಕೋತ್ತರ ಪದವಿಯನ್ನು ಆರಂಭಿಸಿರುವುದು ಪ್ರಸಕ್ತ ಸನ್ನಿವೇಶದಲ್ಲಿ ಉನ್ನತ ಶಿಕ್ಷಣವನ್ನು ನೀಡುತ್ತಿರುವುದು ತಮ್ಮ ಗುರುಗಳಿಗೆ ನೀಡಿದ ಕಾಣಿಕೆಯಾಗಿದೆ. ಕಾಲೇಜಿನ ಗೌರವಾನ್ವಿತ ಕಾರ್ಯದರ್ಶಿಯವರಾದ ಖ್ಯಾತ ನ್ಯಾಯವಾದಿ ಶ್ರೀ ಪ್ರದೀಪ್ ಕುಮಾರ್ ರವರು ಸಂಧ್ಯಾ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಗುರುಗಳ ಮಾರ್ಗದರ್ಶನದಂತೆ ಸಂಧ್ಯಾ ಕಾಲೇಜನ್ನು ಉಳಿಸಿ ಬೆಳೆಸುವಲ್ಲಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಾಲೇಜಿನ ಸುವರ್ಣಮಹೋತ್ಸವದ ಸುಸಂದರ್ಭದಲ್ಲಿ ಕಾಲೇಜು ಕಟ್ಟಡದ ವಿಸ್ತರಣೆಯನ್ನು ಮಾಡಿ ಮೇಲ್ದರ್ಜೆಗೇರಿಸುವಲ್ಲಿ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪಾತ್ರ ಸ್ಮರಣೀಯವಾದುದು.
ವಿಷಯ ತಜ್ಞ ಪ್ರಾಧ್ಯಾಪಕರು, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ–ವಿದ್ಯಾರ್ಥಿನಿ ನಿಲಯ, ಒಳ ಹಾಗೂ ಹೊರ ಕ್ರೀಡಾಂಗಣ, ಅಡಿಟೋರಿಯಂ, ಲ್ಯಾಂಗ್ವೇಜ್ ಲ್ಯಾಬ್, ಕಂಪ್ಯೂಟರ್ ಲ್ಯಾಬ್, ಐ ಸಿ ಟಿ ಕ್ಲಾಸ್ ರೂಮ್ ಇನ್ನಿತರ ಮೂಲಭೂತ ಸೌಕರ್ಯಗಳಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯ ವಾತಾವರಣವನ್ನು ಕಲ್ಪಿಸಿದೆ. ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ, ನಾಯಕತ್ವ, ಸೇವಾ ಮನೋಧರ್ಮ ಹೀಗೆ ಸರ್ವತೋಮುಖ ಅಭಿವೃದ್ಧಿಗಾಗಿ ವಿಚಾರ–ಸಂಕಿರಣ, ಯೋಗಶಿಕ್ಷಣ, ಕೈಗಾರಿಕಾ ಸಂದರ್ಶನ, ಸಮಾಜೋ-ಆರ್ಥಿಕ ಕ್ಷೇತ್ರಕಾರ್ಯ, ಕೃಷಿ ಪ್ರಾತ್ಯಕ್ಷಿಕೆ, ರಕ್ತದಾನ ಶಿಬಿರ, ವನಮಹೋತ್ಸವ, ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಯುಜಿಸಿಯಿಂದ ನ್ಯಾಕ್ ಮಾನ್ಯತೆ ಗೆ ಒಳಪಟ್ಟಿರುವ ಸಂಸ್ಥೆಯಾಗಿದೆ. ಎನ್.ಎಸ್.ಎಸ್., ಎನ್. ಸಿ. ಸಿ., ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಸಾಂಸ್ಕೃತಿಕ ಸಂಘ, ವಾಣಿಜ್ಯ ಸಂಘ, ವೃತ್ತಿ ಮಾರ್ಗದರ್ಶಕ ಘಟಕ, ಮಹಿಳಾ ವೇದಿಕೆ, ಇಕೋ ಕ್ಲಬ್, ರೋವರ್ಸ್ ಅಂಡ್ ರೇಂಜರ್ಸ್, ರಕ್ಷಕ-ಶಿಕ್ಷಕ ಸಂಘ, ಹಳೆವಿದ್ಯಾರ್ಥಿ ಸಂಘ ಹೀಗೆ ಈ ಎಲ್ಲಾ ಸೌಲಭ್ಯಗಳಿಂದ ಸಂಧ್ಯಾ ಕಾಲೇಜಿನ ಶಿಕ್ಷಣ ವ್ಯವಸ್ಥೆಯು ಹಗಲು ಕಾಲೇಜಿನ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವಾಗಿ ಪರಿಪೂರ್ಣ ಶೈಕ್ಷಣಿಕ ಶಿಸ್ತಿನಿಂದ ಕೂಡಿದೆ. ಪದವಿ ಕಲಿಯುವ ಆಸಕ್ತ ವಿದ್ಯಾರ್ಥಿಗಳಿಗೆ ಸಮಯ ಹೊಂದಾಣಿಕೆ ಹೊರತುಪಡಿಸಿ ಹಗಲು ಹೊತ್ತಿನ ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ವ್ಯತ್ಯಾಸವಿರುವುದಿಲ್ಲ.
ಮಂಗಳೂರು ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ಗರಿಷ್ಠ ಸಾಧನೆ ಮಾಡಿದ ಕಾಲೇಜುಗಳಲ್ಲಿ ಇದು ಒಂದಾಗಿದೆ. ನಮ್ಮ ಕಾಲೇಜಿನ ಎನ್.ಎಸ್.ಎಸ್. ಘಟಕವು ರಾಜ್ಯ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದಿರುತ್ತದೆ. ಕ್ರೀಡೆಯಲ್ಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶ್ವವಿದ್ಯಾನಿಲಯದಿಂದ ಅಂತರ್ ವಿಶ್ವವಿದ್ಯಾನಿಲಯ ಹಾಗೂ ರಾಜ್ಯ– ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವಂತಹ ಅನೇಕ ವಿದ್ಯಾರ್ಥಿಗಳನ್ನು ನೀಡಿರುವ ಸಂಸ್ಥೆಯಾಗಿದೆ.
ಪೇಜಾವರ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಪು ಕ್ಷೇತ್ರದ ಶಾಸಕ ಶ್ರೀ ಲಾಲಾಜಿ ಮೆಂಡನ್, ವಿದ್ವಾಂಸರಾದ ಕಬ್ಯಾಡಿ ಜಯರಾಮ ಭಟ್, ಕಟೀಲು ಶ್ರೀ ಹರಿ ನಾರಾಯಣ ಅಸ್ರಣ್ಣ, ರಾಜಕೀಯ– ಸಹಕಾರಿ ಕ್ಷೇತ್ರದ ಧುರೀಣರಾದ ಯಶ್ ಪಾಲ್ ಸುವರ್ಣ , ಜಯಕರ ಶೆಟ್ಟಿ ಇಂದ್ರಾಳಿ, ಚಂದ್ರಹಾಸ ಶೆಟ್ಟಿ, ಮಟ್ಟು ಲಕ್ಷ್ಮಿನಾರಾಯಣ ರಾವ್, ಮುರುಳೀಧರ ಬಲ್ಲಾಳ್, ಉದ್ಯಮಿಗಳಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಶಾರದಾ ಇಂಟರ್ನ್ಯಾಷನಲ್ ನ ಶ್ರೀ ಸುಧಾಕರ್ ಶೆಟ್ಟಿ, ಉದಯ ಕಿಚನ್ ನ ರಮೇಶ್ ಬಂಗೇರ, ಗೋಪಾಲ್ ಸಿ ಬಂಗೇರ ಮೊದಲಾದ ಗಣ್ಯರು ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಒಟ್ಟಿನಲ್ಲಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಶ್ರೀಪಾದರ ಆಶಯದಂತೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ನಾಡಿನ ಬೇರೆ ಬೇರೆ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಹುಬೇಡಿಕೆಯ ಕೇಂದ್ರವಾಗಿದೆ. ಪ್ರಸ್ತುತ 2021– 22ನೇ ಸಾಲಿನ ಶೈಕ್ಷಣಿಕ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ ( 94482 62319, 0820 252 0743) ಇವರನ್ನು ಸಂಪರ್ಕಿಸುವುದು.